		ಮೈಥಿಲೀಶರಣ ಗುಪ್ತ -
1886-1964. ರಾಷ್ಟ್ರಕವಿ ಬಿರುದಾಂಕಿತ ಗುಪ್ತರು ಆಧುನಿಕ ಹಿಂದಿಯ ಮೊದಲ ಪೀಳಿಗೆಯ ಪ್ರಮುಖ ಕವಿಗಳಲ್ಲಿ ಅಗ್ರಗಣ್ಯರು. ಹುಟ್ಟಿದ್ದು ಉತ್ತರ ಪ್ರದೇಶದ ಚಿರಗಾಂವ್‍ನಲ್ಲಿ. ತಂದೆ- ರಾಮ್‍ಚರಣ್ ತಾಯಿ- ಕಾಶೀಬಾಯಿ. ಗುಪ್ತರು ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಆಯಿತು. ಪ್ರೌಢಶಾಲಾ ಶಿಕ್ಷಣಕ್ಕಾಗಿ ಝಾನ್ಸಿಗೆ ಹೋದರಾದರೂ ಶಾಲಾ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಯಂ ಅಧ್ಯಯನದಲ್ಲಿ ನಿರತರಾದರು. ಹಿಂದೀ ಹಾಗೂ ಸಂಸ್ಕøತವನ್ನು ಕಲಿತು ಆ ಭಾಷೆಗಳ ಮಹತ್ತ್ವದ ಕವಿಗಳ ಕೃತಿಗಳನ್ನೆಲ್ಲ ಓದಿದರು. ಬಂಗಾಲಿ ಕಲಿತು ಆ ಭಾಷೆಯಲ್ಲಿಯೂ ಪಾಂಡಿತ್ಯಗಳಿಸಿದರು. ಕೌಟುಂಬಿಕ ಜೀವನ ಅಷ್ಟೇನೂ ಸುಖಮಯವಾದುದಲ್ಲ. ಇವರ ಮದುವೆ ಒಂಬತ್ತನೆಯ ವಯಸ್ಸಿನಲ್ಲಾಯಿತು. ನಾನಾ ಕಾರಣಗಳಿಂದ ಮೂರು ವಿವಾಹಗಳನ್ನು ಮಾಡಿಕೊಂಡರು. ಹತ್ತಾರು ಮಕ್ಕಳನ್ನು ಪಡೆದು ಕಳೆದುಕೊಂಡರು. ಕೊನೆಗೆ ಉಳಿದವ ಒಬ್ಬನೇ ಒಬ್ಬ ಮಗ. ಹೀಗಾಗಿ ಇವರ ಕಾವ್ಯಗಳಲ್ಲಿ ಹೆಣ್ಣಿನ ನೋವು, ತ್ಯಾಗ, ಪ್ರೀತಿ, ವಾತ್ಸಲ್ಯಗಳು ದಟ್ಟವಾಗಿ ಚಿತ್ರಿತವಾಗಿವೆ.

ಇವರು ತಮ್ಮ 15ನೆಯ ವಯಸ್ಸಿನಲ್ಲಿಯೇ ಕವಿತೆ ಬರೆಯಲಾರಂಭಿಸಿದರು. ಆ ದಿನಗಳಲ್ಲಿ ವ್ರಜಭಾಷೆ ಕಾವ್ಯಭಾಷೆಯಾಗಿತ್ತು. ವ್ರಜಭಾಷೆಯಲ್ಲಿ ಇವರು ಕವಿತೆ ಬರೆಯುವುದರ ಮೂಲಕ ಕಾವ್ಯಲೋಕಕ್ಕೆ ಪ್ರವೇಶಿಸಿದರು. ಅನಂತರ ಮಹಾವೀರ ಪ್ರಸಾದ ದ್ವಿವೇದಿಯವರ ಪ್ರೇರಣೆ ಪ್ರಭಾವದಿಂದ ಖಡಿಬೋಲಿ ಹಿಂದಿಯಲ್ಲಿ ಬರೆದು ಪ್ರಸಿದ್ಧರಾದರು. ಖಡಿಬೋಲಿ-ಹಿಂದಿಯನ್ನು ಕಾವ್ಯಮಾಧ್ಯಮವನ್ನಾಗಿ ರೂಪಿಸಿದ ಶಕ್ತಿಗಳಲ್ಲಿ ಇವರೂ ಒಬ್ಬರು.

ಇವರು ಪ್ರಮುಖವಾಗಿ ಕವಿ. ಖಂಡಕಾವ್ಯ, ಭಾವಗೀತೆ ಮತ್ತು ಮಹಾಕಾವ್ಯ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ರಂಗ್‍ಮೇ ಭಂಗ್, ಜಯದ್ರಥ್ ವಧ್, ಪಂಚವಟಿ, ಸೈರಂಧ್ರಿ, ವನ್‍ವೈಭವ್, ಬಕಸಂಹಾರ್, ಯಶೋಧರಾ, ಸಿದ್ಧರಾಜ್, ನಹುಷ, ದ್ವಾಪರ್-ಇವು ಇವರ ಖಂಡಕಾವ್ಯಗಳು. ಇವುಗಳಲ್ಲಿ ಮುಖ್ಯ ಹಾಗೂ ಪ್ರಾತಿನಿಧಿಕವಾದುವುಗಳೆಂದರೆ ಪಂಚವಟಿ, ಯಶೋಧರಾ ಮತ್ತು ದ್ವಾಪರ್. ಪಂಚವಟಿಯನ್ನು ಆರಂಭದಲ್ಲಿ ಸಾಕೇತದ ಒಂದು ಅಧ್ಯಾಯವಾಗಿ ಬರೆದರಾರೂ ಅದನ್ನು ಸ್ವತಂತ್ರ ಖಂಡಕಾವ್ಯವನ್ನಾಗಿ ಪ್ರಕಟಿಸಿದರು. ಇದು ವ್ಯಕ್ತಿಪ್ರಧಾನ ಖಂಡಕಾವ್ಯ. ಇಲ್ಲಿನ ನಾಯಕ ಲಕ್ಷ್ಮಣ. ಕಥಾವಸ್ತು ಆಧುನಿಕ ಸಮಾಜದ ಸಂಕೀರ್ಣತೆಗಳೆನ್ನೆಲ್ಲ ಅಳವಡಿಸಿಕೊಂಡಿದೆ. ಜೊತೆಗೆ ಗಾಂಧೀವಾದದ ಗಾಢ ಪ್ರಭಾವವನ್ನೂ ಇಲ್ಲಿ ಕಾಣಬಹುದು. ಯಶೋಧರಾ ಒಂದು ಮಹತ್ತ್ವದ ಕೃತಿ. ಯಶೋಧರೆಯ ಉದಾತ್ತ ಜೀವನ ಚಿತ್ರಣವೇ ಈ ಕಾವ್ಯದ ಪರಮಗುರಿ. ಅಮಿತಾಭನ ಪ್ರಕಾಶಕ್ಕೆ ಆತನ ಭಕ್ತರ ಕಣ್ಣುಗಳು ಕೋರೈಸಿಹೋದವು. ಅವರಲ್ಲಿ ಯಾರೂ ಯಶೋಧರೆಯತ್ತ ನೋಡಲಿಲ್ಲ ಎಂದು ಕವಿಗಳೇ ಮುನ್ನುಡಿಯಲ್ಲಿ ಹೇಳಿದ್ದಾರೆ. ಹೀಗಾಗಿ ಯಶೋಧರೆಯ ವಿರಹಮಯ ಬದುಕಿನ ಹಾಗೂ ವಾತ್ಸಲ್ಯಮಯ ಹೃದಯದ ಸಹಸ್ರ ಮುಖಗಳನ್ನು ಈ ಖಂಡಕಾವ್ಯ ಮನೋಜ್ಞವಾಗಿ ನಿರೂಪಿಸುತ್ತದೆ.
ಇವರು ರಾಮಭಕ್ತ ಎಂದು ಹೆಸರಾಗಿದ್ದರೂ ತಮ್ಮ `ದ್ವಾಪರ್ ಕಾವ್ಯಕ್ಕೆ ಭಾಗವತದಿಂದ ವಸ್ತುವನ್ನು ಆರಿಸಿಕೊಂಡು ಕೃಷ್ಣನ ವಿರಾಟ್ ವ್ಯಕ್ತಿತ್ವವನ್ನು ಚಿತ್ರಿಸಿ, ಸಮಕಾಲೀನ ಸಮಸ್ಯೆಗಳಿಗೂ ಅಭಿವ್ಯಕ್ತಿಯನ್ನಿತ್ತಿದ್ದಾರೆ. ಆದರ್ಶರಾಜ್ಯ, ಪ್ರಜಾಪಾಲಕನ ಕರ್ತವ್ಯ, ಧಾರ್ಮಿಕ ಸಹಿಷ್ಣುತೆ, ನಾರೀ ಜಾಗೃತಿ ಮುಂತಾದವನ್ನು ಕುರಿತಂತೆ ದ್ವಾಪರ್ ವ್ಯಾಪಕವಾಗಿ ವಿವೇಚಿಸುತ್ತದೆ.
ಜಯ್ ಭಾರತ್, ಭಾರತ್_ಭಾರತೀ, ಸಾಕೇತ್_ಇವು ಇವರು ಬರೆದ ಮೂರು ಮಹಾಕಾವ್ಯಗಳು. ಮಹಾಭಾರತದ ಪ್ರಸಂಗಗಳನ್ನು ಆಧರಿಸಿ ಬರೆದ ಖಂಡಕಾವ್ಯಗಳನ್ನು ಅಲ್ಪ ಸ್ವಲ್ಪ ಪರಿವರ್ತನೆಯೊಂದಿಗೆ ಸಂಯೋಜಿಸಿದ ಹೊಸ ರೂಪವೇ ಜಯ್‍ಭಾರತ್. ಮಹಾಭಾರತದ ಮುಖ್ಯ ಕಥಾಹಂದರವನ್ನು ಆಧರಿಸಿರುವ ಈ ಕಾವ್ಯ ಪುನುರುತ್ಥಾನಯುಗದ ಮೌಲ್ಯ ಸಂಘರ್ಷವನ್ನು ಚಿತ್ರಿಸುತ್ತದೆ. 

`ಭಾರತ್_ಭಾರತೀ ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡ ಜನಪ್ರಿಯ ಕಾವ್ಯ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ರಾಷ್ಟ್ರೀಯ ಭಾವವನ್ನು ಭಾರತೀಯರಲ್ಲಿ ಜಾಗೃತಗೊಳಿಸುವಲ್ಲಿ ಈ ಕಾವ್ಯ ಮುಖ್ಯಪಾತ್ರ ವಹಿಸಿತು. ಅತೀತ್, ವರ್ತಮಾನ್, ಮತ್ತು ಭವಿಷ್ಯತ್ ಎಂದು ಮೂರು ಭಾಗಗಳಲ್ಲಿ ವಿಭಕ್ತವಾಗಿರುವ ಈ ಕೃತಿಯ ಮುಖ್ಯ ವಸ್ತು ರಾಷ್ಟ್ರ ಚಿಂತನೆಯೇ ಆಗಿದೆ. ಇದು ಪ್ರಕಟವಾದಾಗ ಸಾಕಷ್ಟು ವಿವಾದಕ್ಕೂ ಗುರಿಯಾಯಿತು.

`ಸಾಕೇತ್ ಈ ಶತಮಾನದ ಹಿಂದೀ ಸಾಹಿತ್ಯದ ಮೇರು ಕೃತಿ ಎನ್ನಲಾಗಿದೆ. ರವೀಂದ್ರರ ಕಾವ್ಯೇರ್ ಉಪೇಕ್ಷಿತಾ ಹಾಗೂ ಮಹಾವೀರ್ ಪ್ರಸಾದ್ ದ್ವಿವೇದಿ ಅವರ ಊರ್ಮಿಳೆ ಬಗೆಗೆ ಕವಿಗಳ ಉದಾಸೀನ ಎಂಬ ಲೇಖನಗಳಿಂದ ಪ್ರೇರಿತರಾಗಿ ಊರ್ಮಿಳೆಯನ್ನು ಕೇಂದ್ರವಾಗಿರಿಸಿಕೊಂಡು ರಚಿಸಿದ ಕಾವ್ಯ. ಊರ್ಮಿಳೆಯ ಪ್ರೇಮ ಹಾಗೂ ವಿರಹಮಯ ಬದುಕನ್ನು ಹೃದಯಂಗಮವಾಗಿ ಚಿತ್ರಿಸುವ ಪ್ರೇಮಕಾವ್ಯ.

ಭಾವಗೀತೆಗಳ ಪ್ರಕಾರದಲ್ಲಿಯೂ ಇವರದು ಅನುಪಮ ಸಾಧನೆ. ಇವರು ರಚಿಸಿರುವ ನೂರಾರು ಭಾವಗೀತೆಗಳ ವ್ಯಕ್ತಿ ಹಾಗೂ ರಾಷ್ಟ್ರಜೀವನದ ಸಹಸ್ರ ಮುಖಗಳ ದರ್ಶನ ಮೂಡಿಸುತ್ತದೆ. ಭಾವ, ಸಂಕ್ಷಿಪ್ತತೆ, ಗೇಯಾತ್ಮಕತೆಯ ದೃಷ್ಟಿಯಿಂದ ಪರಿಪುಷ್ಟಗೊಂಡಿರುವ ಭಾವಗೀತೆಗಳು ಆ ಪ್ರಕಾರವನ್ನು ಶ್ರೀಮಂತಗೊಳಿಸಿವೆ. ಪದ್ಯ ಪ್ರಬಂಧ್, ಪತ್ರಾವಳೀ, ವೈತಾಲಕ್, ಸ್ವದೇಶ್, ಸಂಗೀತ್, ಝಂಕಾರ್, ಆಸ್ವಾದ್, ಭೂಮಿಗೀತ್, ಮಂಗಳಘಟ್ -ಇವು ಇವರ ಕೆಲವು ಮುಖ್ಯ ಕವಿತಾ ಸಂಗ್ರಹಗಳು.

ಅನುವಾದ ಕ್ಷೇತ್ರದಲ್ಲಿಯೂ ಸಹ ಇವರ ಸಾಧನೆ ಮಹತ್ತ್ವದ್ದಾಗಿದೆ. ಇವರ ಶಾಕುಂತಲಾ ಕಾಳಿದಾಸನ ಕಾವ್ಯದ ಭಾವಾನುವಾದ. ಇದಲ್ಲದೆ ಇವರು ಸಂಸ್ಕøತದಿಂದ ಮಾಡಿದ ಅನುವಾದಗಳಲ್ಲಿ ಭಾಸನ ದೂತ ಘಟೋತ್ಕಚ, ಸ್ವಪ್ನ, ವಾಸವದತ್ತಾ, ಭಗವದ್ಗೀತೆಯ ಎರಡನೆಯ ಅಧ್ಯಾಯದಿಂದ ಹಿಂದೀ ಅನುವಾದ ಮುಖ್ಯವಾದವು. ಇವರು ಬಂಗಾಲೀಯಿಂದ ಮಾಡಿರುವ ಅನುವಾದಗಳು ಹಿಂದೀ ಸಾಹಿತ್ಯಕ್ಕೇ ಶ್ರೇಷ್ಠವಾದ ಕೊಡುಗೆಗಳಾಗಿವೆ.

ಇವರು ಹಲವಾರು ಗೌರವಗಳಿಂದ ಸನ್ಮಾನಿತರಾಗಿದ್ದಾರೆ. ಭಾರತ್_ಭಾರತೀ ಮತ್ತು ಸಾಕೇತ್ ಪ್ರಕಟವಾದ ಮೇಲೆ ಇವರ ಹೆಸರು ತುಂಬ ಪ್ರಸಿದ್ಧಿಗೆ ಬಂದಿತು. ಮಂಗಳಾ ಪ್ರಸಾದ್ ಪಾರಿತೋಷಿಕ, ಉತ್ತರ ಪ್ರದೇಶ ಸರ್ಕಾರ ನಾಗರೀ ಪ್ರಚಾರಿಣಿ ಸಭೆ - ಇವು ಇವರನ್ನು ಪ್ರಶಸ್ತಿಗಳಿಂದ ಗೌರವಿಸಿದವು. ಹಿಂದೀ ಸಾಹಿತ್ಯ ಸಮ್ಮೇಳನ 1946ರಲ್ಲಿ ತನ್ನ `ಸಾಹಿತ್ಯ ವಾಚಸ್ಪತಿ' ಉಪಾಧಿ ನೀಡಿದರೆ ಆಗ್ರಾ ವಿಶ್ವವಿದ್ಯಾಲಯ 1948ರಲ್ಲಿ ಗೌರವ ಡಿ.ಲಿಟ್. ಪದವಿ ನೀಡಿತು. ಭಾರತ ಸರ್ಕಾರ 1955ರಲ್ಲಿ ಪದ್ಮಭೂಷಣ ಉಪಾಧಿ ನೀಡಿ ಗೌರವಿಸಿತು. 1952ರಿಂದ ಎರಡು ಅವಧಿಗೆ ಇವರು ರಾಜ್ಯಸಭೆಯ ನಾಮಕರಣ ಸದಸ್ಯರಾಗಿದ್ದರು. 1954ರಲ್ಲಿ ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ವಿಮರ್ಶಕರು ಮತ್ತು ಜನತೆ ಇವರನ್ನು ಹಿಂದೀ ಭಾಷೆಯ ಯುಗ ಪ್ರವರ್ತಕ ಕವಿ. ರಾಷ್ಟ್ರಕವಿ, ಮಹಾಕವಿ, ದ್ವಿವೇದಿಯುಗದ ಸಿದ್ಧಕವಿ. ಆಧುನಿಕ ಯುಗದ ವೈತಾಲಿಕ ಮುಂತಾದ ವಿಶೇಷಣ, ಉಪಾದಿಗಳಿಂದ ಗೌರವಿಸಿದ್ದಾರೆ. ಇವರು 1964ರಲ್ಲಿ ನಿಧನರಾದರು.
 (ಟಿ.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ